ಬಹು ವರ್ಷಗಳ ಬಳಿಕ ಜೋರಾಗಿ ನಡೆದ ಕಂದಾಯ ಇಲಾಖೆಯ ಕ್ರೀಡಾಕೂಟ; ಬಂಟ್ವಾಳಕ್ಕೆ ಸಮಗ್ರ ಚಾಂಪಿಯನ್ ಪಟ್ಟ

kandaya

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ(ರಿ) ಬೆಂಗಳೂರು ಜಿಲ್ಲಾ ಘಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಕಂದಾಯ ಇಲಾಖೆಯ ವಾರ್ಷಿಕ ಕ್ರೀಡಾಕೂಟ–2026 ಸಂಭ್ರಮ, ಸ್ಪರ್ಧಾತ್ಮಕತೆ ಮತ್ತು ಕ್ರೀಡಾ ಉತ್ಸಾಹದ ನಡುವೆ ಯಶಸ್ವಿಯಾಗಿ ನೆರವೇರಿತು.

ಬಹು ವರ್ಷಗಳ ಬಳಿಕ ಆಯೋಜಿಸಲಾದ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಕಂದಾಯ ಇಲಾಖೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವ ಮೆರೆದರು. ವಿವಿಧ ಕ್ರೀಡಾ ಸ್ಪರ್ಧೆಗಳು ಉತ್ಸಾಹಭರಿತವಾಗಿ ನಡೆದಿದ್ದು, ತಂಡಗಳ ಮಧ್ಯೆ ತೀವ್ರ ಪೈಪೋಟಿ ಕಂಡುಬಂತು.

ಕಾರ್ಯಕ್ರಮದ ಸಮಗ್ರ ನಿರ್ವಹಣೆಯನ್ನು ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಜನಾರ್ಧನ್ ಜೆ ಅವರ ನೇತೃತ್ವದ ತಂಡ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿತು. ಕ್ರೀಡಾಕೂಟದ ಯಶಸ್ಸಿಗೆ ಶ್ರಮಿಸಿದ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಸಿ ಅಭಿನಂದಿಸಿದರು.

ಆಹಾರ ವ್ಯವಸ್ಥೆ, ಕ್ರೀಡಾ ಆಯೋಜನೆ, ಸ್ಪರ್ಧೆಗಳ ನಿರ್ವಹಣೆ ಹಾಗೂ ಬಹುಮಾನ ವಿತರಣೆಯವರೆಗೆ ಎಲ್ಲಾ ವ್ಯವಸ್ಥೆಗಳು ಮಾದರಿಯಾಗಿದ್ದವು ಎಂದು ಭಾಗವಹಿಸಿದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ರೀಡಾಕೂಟದ ಪ್ರಮುಖ ಫಲಿತಾಂಶಗಳು :

  • ಕ್ರಿಕೆಟ್ : ಬಂಟ್ವಾಳ ತಂಡ ಚಾಂಪಿಯನ್, ಸುಳ್ಯ ರನ್ನರ್ಸ್
  • ಪುರುಷರ ಹಗ್ಗಜಗ್ಗಾಟ : ಬಂಟ್ವಾಳ ಪ್ರಥಮ, ಜಿಲ್ಲಾಧಿಕಾರಿಗಳ ಕಚೇರಿ ಮಂಗಳೂರು ದ್ವಿತೀಯ
  • ಮಹಿಳೆಯರ ಹಗ್ಗಜಗ್ಗಾಟ : ಬಂಟ್ವಾಳ ವಿಜೇತ, ಬೆಳ್ತಂಗಡಿ ರನ್ನರ್ಸ್
  • ಮಹಿಳೆಯರ ಥ್ರೋಬಾಲ್ : ಸುಳ್ಯ ತಂಡ ಪ್ರಥಮ, ಕಡಬ ದ್ವಿತೀಯ
  • ಪುರುಷರ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ : ಬಂಟ್ವಾಳ ವಿಜೇತ, ಮಂಗಳೂರು ರನ್ನರ್ಸ್
  • ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ : ಜಿಲ್ಲಾಧಿಕಾರಿಗಳ ಕಚೇರಿ ಮಂಗಳೂರು ಪ್ರಥಮ, ಬೆಳ್ತಂಗಡಿ ದ್ವಿತೀಯ

ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಂಟ್ವಾಳ ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರು, ಅಪರ ಜಿಲ್ಲಾಧಿಕಾರಿಯವರು, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಸಹಾಯಕ ಆಯುಕ್ತರು, ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರು, ಎನ್‌ಐಟಿಕೆ ಸಂಸ್ಥೆಯ ಡೀನ್‌, ರಾಜ್ಯ ಹಾಗೂ ತಾಲೂಕು ಮಟ್ಟದ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *